ನಾಣ್ಯ ನೋಟುಗಳಿಗೆ ಸಂಬಂಧಿಸಿದ ಅಪರಾಧಗಳು -
ಒಂದು ನಿಶ್ಚಿತ ಶುದ್ಧತೆಯ ಲೋಹದ ನಿಶ್ಚಿತ ತೂಕದ ತುಂಡನ್ನು ನಾಣ್ಯವಾಗಿ ಬಳಸುವ ಪದ್ಧತಿ ಬಂದಾಗ ಆರಂಭವಾಗಿ, ಒಂದು ನಿಶ್ಚಿತ ಸಂಕೇತ ಮೌಲ್ಯವನ್ನು ಸೂಚಿಸುವ ನಾಣ್ಯಗಳನ್ನು ಟಂಕಿಸುವ ಹಾಗೂ ನೋಟುಗಳನ್ನು ಮುದ್ರಿಸುವ ಪದ್ಧತಿ ಇರುವ ಪ್ರಚಲಿತ ಕಾಲದವರೆಗೂ ನಾಣ್ಯ ನೋಟುಗಳಿಗೆ ಸಂಬಂಧಿಸಿದಂತೆ ಅನೇಕ ಅಪರಾಧಗಳು ನಡೆಯುತ್ತಲೇ ಇವೆ. ಇವನ್ನು ತಡೆಗಟ್ಟಲು ಮತ್ತು ಈ ಅಪರಾಧಗಳನ್ನು ಎಸಗಿದವರನ್ನು ಸೂಕ್ತವಾಗಿ ದಂಡಸಲು ಸರ್ಕಾರಗಳು ಎಲ್ಲ ಕಾಲಗಳಲ್ಲೂ ಉಗ್ರ ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿವೆ. ನಾಣ್ಯಗಳ ಮುಖಮೌಲ್ಯ ಅವುಗಳ ಒಡಲಿನ ಲೋಹದ ನಿಜಮೌಲ್ಯಕ್ಕೆ ಸಮನಾಗಿರುತ್ತಿದ್ದ ಕಾಲದಲ್ಲಿ ಅಗ್ಗದ ಲೋಹಗಳಿಂದಲೋ ಅವನ್ನು ಮಿಶ್ರಮಾಡಿಯೋ ನಾಣ್ಯಗಳನ್ನು ರಹಸ್ಯವಾಗಿ ತಯಾರಿಸುತ್ತಿದ್ದವರೂ ಚಲಾವಣೆಗೆ ತರುತ್ತಿದ್ದರೂ ನಾಣ್ಯಗಳ ಅಂಚುಗಳನ್ನು ಕತ್ತರಿಸುತ್ತಿದ್ದವರೂ ಉಂಟು. ನಾಣ್ಯಗಳನ್ನು ಕತ್ತರಿಸಿದರೆ ಪತ್ತೆಯಾಗುವುದು ಸಾಧ್ಯವಾಗುವಂತೆ ಅವುಗಳ ಏಣುಗಳ ಮೇಲೆ ಒಂದೇ ಸಮನಾದ ಗೀರುಗಳನ್ನು ಮಾಡುವ ಪದ್ದತಿ ಬೆಳೆದು ಬಂದದ್ದು ಈ ಕಾರಣದಿಂದಲೇ. 

	ನಾಣ್ಯಗಳ ಸಂಕೇತ ಮೌಲ್ಯಕ್ಕಿಂತ ಕಡಿಮೆ ಮೌಲ್ಯದ ಮಿಶ್ರಲೋಹಗಳನ್ನು ಅವಕ್ಕಾಗಿ ಉಪಯೋಗಿಸುವ ಪದ್ದತಿ ಜಾರಿಗೆ ಬಂದಾಗ ಅವೇ ಬಗೆದು ಮಿಶ್ರ ಲೋಹಗಳನ್ನು ಬಳಸಿ ನಾಣ್ಯಗಳನ್ನು ರಹಸ್ಯವಾಗಿ ಟಂಕಿಸಿ ಚಲಾವಣೆಗೆ ತರುವುದು ಲಾಭಕರವಾದ ಹವ್ಯಾಸವೆಂದು ಅನಿಸಿದ ಕೆಲವರು ಇಂಥ ಅಪರಾಧಗಳಲ್ಲಿ ತೊಡಗುವುದುಂಟು. ಕಾಗದದ ನೋಟುಗಳನ್ನು ರಹಸ್ಯವಾಗಿ ಮುದ್ರಿಸುವುದಂತೂ  ತುಂಬ ಲಾಭದಾಯಕವಾಯಿತು. ಇಂಥ ನಾಣ್ಯಗಳಾಗಲಿ, ನೋಟುಗಳಾಗಲೀ ದೇಶದಲ್ಲಿ ಚಲಾವಣೆಗೆ ಬಂದರೆ, ಅದರಿಂದ ಆರ್ಥಿಕ ಜೀವನವೇ ಅಡಿಮೇಲಾಗುವ ಅಪಾಯ ಇರುತ್ತದೆ. ಸರ್ಕಾರದ ಅಧಿಕಾರಕ್ಕೆ ಪ್ರತಿಯಾದ ಒಂದು ಅನೈತಿಕ ವ್ಯವಸ್ಥೆಯೇ ಜಾರಿಗೆ ಬರುವುದಕ್ಕೆ ಅವಕಾಶ ನೀಡುವುದು ಅಪಾಯಕರ.

	ಖೋಟಾ ನಾಣ್ಯಗಳ ತಯಾರಿಕೆ ಭಾರತದ ದಂಡ ಸಂಹಿತೆಯ ಪ್ರಕಾರ ಅಪರಾಧವಾಗುತ್ತದೆ. ಒಂದು ರಾಷ್ಟ್ರದ ಪರಮಾಧಿಕಾರವುಳ್ಳ ಸರ್ಕಾರದ ಮುದ್ರೆಯಿಂದ ಕೂಡಿ, ಹಣವಾಗಿ ಉಪಯೋಗವಾಗುವಂತೆ ಹೊರಡಿಸಿದ, ಹಾಗೂ ಪ್ರಚಲಿತ ಕಾಲದಲ್ಲಿ ಹಾಗೆ ಉಪಯೋಗವಾಗುತ್ತಿರುವ ಲೋಹವನ್ನು ನಾಣ್ಯವೆಂದು ವ್ಯಾಖ್ಯಾನಿಸಲಾಗಿದೆ. ಖೋಟಾ ನಾಣ್ಯದ ತಯಾರಿಕೆಗೆ ಸಂಬಂಧಿಸಿದ ಉಪಕರಣದ ಯಾವುದೇ ಭಾಗವನ್ನು ಮಾಡುವವರು ಭಾರತದಲ್ಲಿ ಏಳು ವರ್ಷಗಳವರೆಗೆ ಸಜೆಗೆ ಒಳಗಾಗಬಹುದು. ಖೋಟಾ ನಾಣ್ಯ ತಯಾರಿಸಿದವನಿಗೆ ಆಜೀವಸಜೆ ವಿಧಿಸಬಹುದಾಗಿದೆ. ಖೋಟಾ ನಾಣ್ಯ ತಯಾರಿಸುವ ಉಪಕರಣ ಮಾಡುವುದು, ಇಲ್ಲವೆ ಮಾರುವುದು, ಗೊತ್ತಿದ್ದೂ ಅವನ್ನು ವಶದಲ್ಲಿಟ್ಟುಕೊಳ್ಳುವುದು, ಖೋಟಾ ನಾಣ್ಯವೆಂದು ಗೊತ್ತಿದ್ದೂ ಅದನ್ನು ವಂಚನೆಯ ಉದ್ದೇಶದಿಂದ ವಶದಲ್ಲಿ ಇಟ್ಟುಕೊಳ್ಳುವುದು, ಇಲ್ಲವೆ ಅದೇ ಉದ್ದೇಶದಿಂದ ಇತರರಿಗೆ ಕೊಡುವುದು-ಇವೆಲ್ಲ ಅಪರಾಧಗಳೇ. ನಾಣ್ಯ ಸಂಬಂಧದ ಅಪರಾಧಗಳನ್ನು ಸರ್ಕಾರಿ ಹಾಗೂ ಬ್ಯಾಂಕು ನೋಟುಗಳಿಗೆ ಸಂಬಂಧಿಸಿದಂತೆಯೂ ವಿಸ್ತರಿಸಲಾಗಿದೆ.

(ಆರ್.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ